Saturday, 18 December, 2010

ಉರಿ ಬಿಸಲಲಿ 


ಸುಡು ಕೆಂಡವ ಹೆಕ್ಕಿ


ಒಡಲ ಮಡಿಲಿಗೆ ತುಂಬಿಕೊಂಡು


ಭುವಿಯ ಧಗೆ ಸಣ್ಣದಾಗಿಸಲು 


ನಾನು ಪಾತ್ರದಾರಿಯಾಗಿರುವೆ.

Friday, 24 September, 2010

ಇಳೆಗೆ ಚಿಗುರು

ಮಲ್ಲಿಗೆಯ ಬಳ್ಳಿಯ ತವಕ

ರಂಬೆ ಕೊಂಬೆಗಳನು ಸುತ್ತಿ 

ಕಣ್ತೆರೆದು

ಅಣಕಿಸುವ ಬೆಳಕಿಗೆ ಬೆಳಕನು 

ಆಸರೆಗೆ ತಂಪನು ನೀಡುತ

ಮುಡಿಯನೇರಿ ಸೂಸಿ

ತಾ ಪಡೆದ ಕ್ಷಣದ ಸುಖದಿ

ಕೆಚ್ಚಲ ಹಾಲು ತುಂಬಿ 

ಕರುಳ ಬಳ್ಳಿಯು 

ಹೊರ ಬರಲು ತವಕಿಸುತ್ತಿದೆ

Friday, 17 September, 2010

ರಕ್ಕೆ ಹೂವು-ನಗೆ ಬುಗ್ಗೆ

ರಕ್ಕೆ ಹೂವು
ನನ್ನವಳ ಸೆಳೆತಕೆ ಸಿಕ್ಕಾಗ

ನನ್ನುಸಿರ ಬಸಿದು ನೀರೆರದೆ

ತನು ತುಂಬಿ ಅರಳಿ 

ದುಂಬಿಯ ಸೆಳತಕೆ ಮರುಳಾಗಿ 

ಹಾರಿಹೋದಳು 


ನಗೆ ಬುಗ್ಗೆ

ಕಲ್ಪನೆಗೂ ಸಿಗದೆ 

ಮರೆಯಾಗುತ್ತಿದ್ದ ತೊರೆಯು 

ನಿನ್ನ ನಗುವಿಗೆ 

ದುಮ್ಮುಕ್ಕಿ ಹರಿಯಿತು.

Monday, 13 September, 2010

ಬುಡಬುಡಕೆ

ಶಕುನದ ಹಕ್ಕಿಯ

ಸೂಚನೆಯ

ಇಡಿ ರಾತ್ರಿ ಊರ ಸುತ್ತಿ

ಸಾರಿ ಜಾಬು ಕಟ್ಟಿದವನು 

ಮುಂಜಾನೆ 

ಮನೆ ಮನೆಯ ಅಲೆದು

ಜೋಳಿಗೆಯ ತುಂಬಿಸಿ 

ಬಾಗಿಲ ಬಳಿ ನಿಂತಾಗ 

ಸೂತಕದ ಛಾಯೆಯ ಕಂಡು 

ಬುಡ ಬುಡಕೆಯ 

ನಾಳವು ಸೂಚನೆಯ ನೀಡಲು 

ನಡುಗಿತು

Saturday, 4 September, 2010

ನಿಶಬ್ಧ ಬೆಳಕು

ನನ್ನ ಒಲವನು 

ಒಡೆದ ಮಡಿಕೆ ಎಂದರು.

ನೆರೆ ಮನೆಯಲಿ 

ಮೊಟ್ಟೆ ಇಟ್ಟ ಹಕ್ಕಿ ಎಂದರು.

ಹಣ್ಣಿಲ್ಲದ ಮರದಂತೆ 

ನೀ.. ಬಂಜೆ ಎಂದರೂ...

ನೆರಳಿನ 

ಮಧುರ ಪ್ರೀತಿ 

ಮರೆಯಾಗುವುದೆ ?

Saturday, 28 August, 2010

ಭುವಿಯ ಒಡಲ ಕೂಗು

ಜಗವೆಲ್ಲ ತುಂಬಿಹುವುದು

ನಡೆಸುವ ನಾವಿಕನಿಲ್ಲ

ಓಡುತಿವುದು ಬಂಡಿ 

ಚಿದ್ರಗೊಂಡ ರಭಸಕೆ.

ನೀ ಕರುಣಿಸಿದ ಜನರೆ

ಅಗೆ ಅಗೆದು 

ಬಗೆ ಬಗೆದು

ನಿನ್ನೊಡಲ ಕಣ ಕಣವನು 

ಕಿತ್ತು ತಿನ್ನುತಿಹರು

ನಿಂತು ಬಿಡು ಒಮ್ಮೆ

ನಶಿಸಿ ಹೋಗಲಿ ಮನುಕುಲವೆಲ್ಲ

ಅಲ್ಲಿ, 
ಕಾಡು ಮೇಡುಗಳು ಉಗಮಿಸಲಿ 

ದಾರಿ ದಾರಿಯೆ ಕಣ್ಮರೆಯಾಗಲಿ

ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ 

ಮರು ಹುಟ್ಟಿ ಸಂಭ್ರಮಿಸಲಿ.

Tuesday, 17 August, 2010

ಮಮತೆಯ ಮರೆತವರು

ಈ ಭೂಮಿಯು ಹೆಣ್ಣು 

ಈ ಜಲವು ಹೆಣ್ಣು 

ನೀನೂ ಹೆಣ್ಣು, 

ನಿನ್ನ ಕುಡಿಯು ಹೆಣ್ಣೆಂದು 

ಎದೆಯ ಹಾಲಲಿ 

ಕತ್ತಿ ಮಸೆಯುತ್ತಿರುವೆ

ಇದು ಹೆಣ್ಣಿನ ಭಲಾಢ್ಯದ 

ಸಂಕೇತವೋ

ಗಂಡಿನ ವ್ಯವಸ್ಥಿತ ಪಿತೂರಿಯೆ ?

Saturday, 7 August, 2010

ದುಗುಡದ ಮನ

ಜೋಡಿ ಎತ್ತುಗಳು 
ದುರುಗುಟ್ಟಿ ನೋಡುತಿವೆ
ನಾ ಹೇಗೆ ತಿಳಿಯಲಿ 
ಅವು ನನ್ನ ತಿವಿಯುವುದಿಲ್ಲವೆಂದು ?


ಜೋಡಿ ಹಕ್ಕಿಗಳೆರಡು
ಗೂಡು ಬಿಟ್ಟು ಹಾರುತಿವೆ 
ನಾ ಹೇಗೆ ತಿಳಿಯಲಿ 
ಅವು ಮತ್ತೆ ಗೂಡು ಸೇರುತ್ತೇವೆಂದು ? ಕಾಣದ ಕೈಗಳೆರಡು
ಕತ್ತು ಹಿಸುಕುತ್ತಿವೆ 
ನಾ ಹೇಗೆ ತಿಳಿಯಲಿ 
ನಾ ಮತ್ತೆ ಬದುಕುತ್ತೇನೆಂದು ? 

ದುಗುಡದ ಮನವೆ ದೂರವಾಗು ನನ್ನಿಂದ 
ದೃಡನಾಗುವೆ ನಾ ಮಸಣದಲ್ಲೂ............

Saturday, 31 July, 2010

ಕೆಂಪು ಕುಂಚ

ನಿನ್ನ ದ್ಯೇಯಗಳ ನಿರ್ಣಯ

ಪರರ ಏಳಿಗೆಗೆ ಮೀಸಲಿರಿಸಿದೆ.

ಸರ್ವಧರ್ಮ

ಸಮಾಭಾವವೆಂದು ತಿಳಿದು

ನ್ಯಾಯ ವಿಚಾರ,

ಅಭಿವ್ಯಕ್ತಿ ನಂಬಿಕೆ ಇಟ್ಟು

ಊಟ, ಉಡುಪು, ಆಚಾರ,

ಭಾಷೆಗಳನ್ನು ಮೈಗೂಡಿಸಿಕೊಂಡು

ದೇಶವನು ಸುಭದ್ರಗೊಳಿಸಲೊರಡುವ

ಸಮಯಕೆ

ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ

ಹಸಿದು ಒಣಗಿದ ಜನರು ಕಾಯುತಿಹರು

ಏಳು, ಎದ್ದೇಳು

ನಿನ್ನ ಲೇಖನಿಯಲಿ ಶಿರವ ಚಂಡಾದಿ

ಹೋರಾಟದ ಹಾದಿಗೆ ಮುನ್ನುಡಿಯಿಡು.

Saturday, 24 July, 2010

ತಣಿಸು ಜೀವಾತ್ಮವ


ಒಡಕು 
ಸನಿಹವಾದಾಗ 
ಮಾತು 
ಹೊರಹೊಮ್ಮಿ 
ಮನ್ನಿಸು ಎನ್ನುವಷ್ಟರಲ್ಲಿ 
ನನಗಾದ ನೋವು 
ನಿನ್ನದಲ್ಲವೆನ್ನುತ 
ಮರು ಮಾತಾಡದೆ 
ಬಾನಾಡಿಗಳ ದಣಿವಿನ ದಾಹವ ತೀರಿಸಿ 
ಮರೆಯಾದಳು

Saturday, 17 July, 2010

ಪಟ್ಟ ಭದ್ರ

ಕುಂಟು ನೆಪದ ಮಿಡತೆ 

ಅಧಿಕಾರದ ಚುಕ್ಕಾಣಿ ಹಿಡಿದಾಗ

ಜೊಲ್ಲು ಸುರಿಸಿ ತೆವಳಿದ 

ಅಳ್ಳೆ ಗುಳ್ಳೆ ಬಸವ

ಸಾರಥಿಯ ಪದವಿ ಪಡೆದು

ಕಸ್ತೂರಿಗೆ ನೊಗವ ಕಟ್ಟಿ

ಊರೆಲ್ಲ ಸುತ್ತಿ ಮರಳುವ ಮುನ್ನ 

ಕತ್ತಲೆಯಲ್ಲಿ ಕಾಗೆಗೆ 

ಕೂಳು ಹಾಕಲಾಗಿತ್ತು.

Friday, 9 July, 2010

ಕೆಡವಿ ತಾರತಮ್ಯವ

ಜಾತಿ ಮತದ

ವಿಷ ಬೀಜ

ಆಂತರ್ಯಕ್ಕೆ ಬಿತ್ತಿ

ರಾಜ್ಯ ಕಟ್ಟಿ

ಅರಸನಾಗಿ ಆಳಿದವನು

ಕೋಮು ಗಲಭೆಯ

ಕಳೆಯೊಳಗೆ ಸಿಲುಕಿ

ಕಾಲವಾದಾಗ

ಊರೂರ ಹಸಿರು ಸಿರಿಯಾಡುವುದು.

Saturday, 26 June, 2010

ಬಿಚ್ಚೋಲೆ

ಗಂಜಲದಲಿ ಮನೆಯ 

ತೊಳೆದು  

ಬಾಗಿಲಂಗಳದಲಿ  

ಸಗಣಿ ಎರಚಿ  

ದೇವರ ಕೋಣೆಯಲಿ 

ಬೆಣವಣ್ಣನಿಟ್ಟು  

ಪೂಜಿಸಿದವಳು, 

ಕೊಟ್ಟಿಗೆಯ ಸ್ವಚ್ಚಗೊಳಿಸಿ  

ಬೆರಣಿಗೆ ಬೆಂಕಿಯಿಟ್ಟು ಬೆಚ್ಚಗಾದಳು

Saturday, 19 June, 2010

ಮಣ್ಣೆಂಟೆಯೊಳು ತೆನೆ ಪೈರು

ಬಡತನದ ದೀವಿಗೆಯ ಹೊತ್ತು

ಕಾಮ ಕ್ರೋಧವನು ಕತ್ತಲೆಗೆ ದೂಡಿ

ಪೂಜೆ ಪುನಸ್ಕಾರವನು ಬದಿಗೊತ್ತಿ

ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು

ಕುರಿಕೆಯ ಹಿಡಿದು ಹೊರಟ ಹಸಿ ಮೈ

ಜಡಿ ಮಳೆಗೆ ಬೆವರು ಸುರಿಸಿ,

ಮಣ್ಣೆಂಟೆ ಕಳೆಗಳನು ಬಡಿದು

ಬಡ ಬಗ್ಗರ ಬದುಕ ಕಟ್ಟಿ

ಮೊಳಕೆಯೊಡೆವ ಮೊದಲೆ

ತನ್ನಾಳುವ ಅರಸನ ಕೈಗೆ ಸಿಕ್ಕು

ಮೇಣಿಯ ಹಾಲನು ಕುಡಿದು

ನೇಗಿಲ ಯೋಗಿಯಾಗಿರುವೆ.

Friday, 11 June, 2010

ಕಾಲವನ್ನು ಸರಿಸಿ

ಸುರುಟಿಕೊಂಡ ಪ್ರೀತಿ

ಕರಗಿದ ಮುತ್ತು

ಒಗ್ಗೂಡಿ

ಮರು ಹುಟ್ಟು.

ನೋವು ಹುದುಗಿಸಿಟ್ಟು

ಅವಳಿಗಾಗಿ ಕಾಯುವ ಕಾಲ

ನನ್ನ ಮುಂದೆ ನಶ್ವರ

Saturday, 5 June, 2010

ಕೃತಿಗೆ ಸಿಗದ ಪ್ರಕೃತಿ

ಅರಕಲು ಭೂಮಿಯ ಕೊರೆದು

ಅರೆ ಬರೆ ಅಕ್ಷರವ ಗೀಚುತ

ಮಾರುದ್ದ ಮಾಲೆಯ ತೂಗಿಕೊಂಡು

ಮಿರ ಮಿರ ಮಿಂಚುವ ಬಟ್ಟೆಯ ಧರಿಸಿ

ಸಾಧನೆಗಳೆಲ್ಲವು, ನಾನು ನನ್ನಿನ್ನೆಂದು,

ಪ್ರಶಸ್ತಿಯೆಂಬ ಹೊಲಸನು ಮುಡಿಗೇರಿಸಿ

ಓರೆ-ಕೋರೆಗಳನು ತಿದ್ದಲೊರಟು

ಪಾಪ ಪರಿವರ್ತನೆಯೆಂಬ

ಮೂಡನಂಬಿಕೆಗೆ  ಸೆಣೆದು

ಪರಲೋಕ ಕಲ್ಯಾಣಕ್ಕಾಗಿ  ಗದ್ದುಗೆಯೊಳಗಿಳಿದು

ಅಸ್ಪ್ರುಶ್ಯತೆಗೆ  ಜನ್ಮ ನೀಡಿ 

ಜಗವೆಲ್ಲ ನನ್ನದೆನ್ನುವವನ 

ಬುದ್ದಿಯೊಳ ಬುದ್ದಿಯನು 

ತಿದ್ದಿ ಬುದ್ದಿಯೇಳಲೋರಟವರು ಮೂರ್ಖರಲ್ಲ

Friday, 28 May, 2010

ಬಿಕ್ಕು ಬಿಮ್ಮು - ಸಂಪ್ರದಾಯ

ಸಂಪ್ರದಾಯ
ಹುಟ್ಟು ಪರಂಪರೆಯ

ಪಟಿಸುತ ಹೊಗಳಿಕೊಳ್ಳುವುದರಲ್ಲೇ

ಮುಳಿಗಿದವನು

ತನ್ನ ಸುತ್ತಲ ಪರಿಸರವ ಮರೆತು

ಬದುಕನ್ನೇ ಕಳೆದುಕೊಂಡನು

ಬಿಕ್ಕು ಬಿಮ್ಮು

ಜೈಲು ಹಕ್ಕಿ

ಹಾರಿ ಹೋದರು

ಬಿಡುಗಡೆಯ ಕನಸು ಕಂಡ

ಕಂಬಿಗಳು ಬಂಧಿಯಾಗಿ

ಬಿಕ್ಕಳಿಸಿ

ಬರುವ  ಅಥಿತಿಗೆ ಸ್ವಾಗತಿಸುತ್ತಿವೆ

Tuesday, 25 May, 2010

ಕೆಂಪು ಕಣಜ

ರೈತರ ಸಲಕರಣೆಗಳು

ಹರಿತವಾದಾಗ

ಇಡೀ ಸಂಕುಲವೇ ಒಗ್ಗೂಡಿ

ಕಹಳೆಯನು ಮೊಳಗಿಸಿದಾಗ

ಹೋರಾಟದ ಹಾದಿಯ

ತಪ್ಪಿಸಲೆತ್ನಿಸುವ

ಮದ್ದು-ಗುಂಡು

ಬಂದೂಕುಗಳೆಲ್ಲ 

ಶಾಂತವಾಗಿಯೇ ಶರಣಾದವು

Monday, 17 May, 2010

ಚಂದಗಾಣು

ಮರವು ನೀ
ಬೇರು ನಾ
ಹಸಿರಿನ ಚಿಗುರು
ನೆರಳ ಉಡುಗೆಯ ತೊಟ್ಟು
ನೊಂದ ಹೃದಯಗಳಿಗೆ
ಆಸರೆಯ ನೀಡಿ
ಸುರಿದ ಮಳೆಗೆ
ಮನಸ್ಸುಗಳೆರಡು ತಿಳಿಗೊಂಡು
ಕಂಡುಕೊಂಡ ದಾರಿಯೆ
ನನ್ನ ನಿನ್ನಯ ಇಂದಿನ ಬದುಕು 

Saturday, 15 May, 2010

ಕನವರಿಕೆಯ ನಿಗಿ

ಸಾಗರದಾಚೆಯ ಕತ್ತಲೆಯ
ಸುಡುಕೆಂಡವು
ಅಲೆಗಳನ್ನೇರಿ  ಸುನಾಮಿಯಂತೆ
ಅತೀ ವೇಗದ ಕೆನ್ನಾಲಿಗೆಯು
ಇಡೀ ದ್ವೀಪವನ್ನೇ  ಆವರಿಸಿ
ಬೆಂಕಿ ಉಂಡೆಯಾಗಿ ಹಾರಿ
ನಮ್ಮೂರ ಕಾಡನು ಸುಟ್ಟು
ಜ್ವಾಲೆಯು ಛಾವಣಿಗೆ ತಾಕಿದೆಂದು
ಹೆದರಿ ಎಚ್ಚರಗೊಂಡಾಗ
ಅಜ್ಜವ್ವ ನಿರೋಲೆಗೆ ಬೆಂಕಿಯಂಟಿಸಿ
ಬೆಚ್ಚಗೆ
ಕೈ ಕಾಯಿಸುತ್ತಿದ್ದನ್ನು ಕಂಡು
ಕನಸು ಕನಸಾಗಿಯೇ ಉಳಿಯಲೆನ್ನುತ
ಅವ್ವನ ಮಡಿಲಲಿ ನಿದ್ರೆಗೆ ಜಾರಿದೆ.

Thursday, 13 May, 2010

ಹೂ ಮಡಕೆಯ ಜೋಗಿ ಪದ

ಮನಸ್ಸು ಮಾಗಿ ಕನವರಿಸಿ

ಬೆತ್ತಲೆ ಭೂಮಿಯೊಳಗಿಳಿದಾಗ

ಮಡಕೆಯೊಳಗಿನ ನೀರು ಇಂಗಿ

ಇಬ್ಬನಿಯ ಮಡಿಲು ಸೇರಿ

ಬೆಳಕ ತುಣುಕಿನ ದಾಹವ ತೀರಿಸಿ

ಮರೆಯಾಗುವುದರೊಳಗೆ

ಮಾಗಿಯ ಬಳ್ಳಿ ಕವಲೊಡೆದು

ಅರಳುವ ಹೂ ತಂಬೂರಿಯಾಗಿ

ಮಠ ಸೇರಿ

ಮೀಟಿದ ನಾದಕೆ

ಸಾಲು ಮಡಕೆಗಳ ಕನಸು ಚೂರಾಗಿ

ತನ್ನೊಡಲ ನೀರ ಹನಿಗಳು

ಜೋಗಯ್ಯನ ಪದಗಳಿಗೆ ತಲೆದೂಗಿ ತಾಳವಾದವು

Monday, 10 May, 2010

ಕಹಿ ಸತ್ಯ
ಹಸಿವಿಗೆ ಅಲೆದ

ಇರುವೆಗಳು

ಬೆಲ್ಲವಿಟ್ಟಾಗ ಬರದೆ

ಬೇವಿಟ್ಟಾಗ ಮುತ್ತಿಕೊಂಡವು ಆಗಸಕ್ಕೆ ರೆಕ್ಕೆ

ಚಿಗುರು ನೀನಲ್ಲ

ಮಳೆಯು ನಾನಲ್ಲ

ಉದುರಿದ ತರಗಲೆಗಳು

ಚಿಗುರೋಡೆಯಲು ತವಕಿಸುತ್ತಿವೆ

ಕರಗುವ ಮುನ್ನ

ಮನವು ಹಗುರಾಗಲೆಂದು


ಅಧಿಕಾರಶಾಹಿ

ಹಣ್ಣಾದ ಎಲೆಗಳು

ಉದುರಿದಾಗ

ಚಿಗುರೆಲೆಯ ನೋಡಿ

ಮರಕೆ ಕೊಡಲಿ ಇಟ್ಟವುLiquid beef

ಗೋ ಹತ್ಯೆ ನಿಷೇಧವನ್ನು

ಪ್ರಸ್ತಾಪಿಸಿದಾಗ

ತನ್ನ ಕರುವು

ಕೆಚ್ಚಲನ್ನು ಹೀರಿಕೊಂಡು

ಜಾರಿಗೆ ತಂದಿತು.

Friday, 30 April, 2010

Falling Star

ನಕ್ಷತ್ರದ ಸನಿಹ
ಕತ್ತಲೆಯು ಮಂಡಿಯೂರಿ
ನನ್ನ ಮಡದಿ ಬೆಳಕನ್ನು
ಹಿಂದಿಗಿರುಸುವಂತೆ
ಕೋರಿದಾಗ
ನಿನ್ನೊಳಗೆ
ಮಡದಿ ಇರುವಳೆಂದೇಳಿ 
ಮರೆಯಾಗುವಾಗ
ಬೆಳದಿಂಗಳು ಮೂಡುತ್ತಿತ್ತು.

Wednesday, 28 April, 2010

ಕತ್ತಲ ಬಿಂಬ

ಒಲವನು  ಹಂಬಲಿಸಿ
ಹುಡುಕಲೊರಟು  
ಕಡು ರಾತ್ರಿಯ ತಂಪಲಿ ಬೆಂದು
ಹಳ್ಳ - ಕೊಳ್ಳದಲಿ ತೆವಳಿ - ತೆವಳಿ
ಹೂ ದಾರಿಯ ಸವೆಸಿ
ಹಸಿದ ಕಂಗಳ ತಪ್ಪಿಸಿ
ಬಳ್ಳಿಯು ಮರವ ತಬ್ಬಿದಂತೆ
ಚಿಗುರು ಪ್ರೀತಿಯನು
ಹಿಡಿ ಹಿಪ್ಪೆಯಂತೆ ಹೊಸಕಿದಾಗ
ಕನಸುಹೊತ್ತ ಒಲವಿನ ಉಸಿರು ಮಡುಗಟ್ಟಿ
ಹಿಂದಿರುಗಲು
ದಾರಿಕಾಣದೆ ನಿಂತು
ಸುತ್ತುವರೆದ ಸುಂಟರಗಾಳಿಯ ಬೇಡುತಿಹಳು
ಅರಿವಿಲ್ಲದೆ ಸಿಲುಕಿರುವೆ
ಬಿಟ್ಟೋಗಬೇಡ ............ ನನ್ನೆತ್ತಿಕೋ ...........
ನಿನ್ನೊಡಲ ಸೇರಿಸಿ
ಹೊತ್ತೊಯ್ದುಬಿಡು ಅವನಿಲ್ಲದೆಡೆಗೆ.


Tuesday, 27 April, 2010

ಭುವಿಗೆ ಶರಣು

ಸೂರ್ಯ ಚಂದ್ರನ

ಮುನಿಸಿನಲ್ಲಿ

ಕೊಚ್ಚಿಹೋದ ನಕ್ಷತ್ರಗಳು

ಮಂಜಿನ ಹನಿಗಳಲಿ ಮೂಡಿ 

ಬಿಸಿಲ ಬೇಗೆಯನು 

ದಿಕ್ಕರಿಸಿ   

ಕರಗದೆ ಹೂವಾಗಿ ಅರಳಿ

ಗಗನ ಚುಕ್ಕಿ

ಬರಚುಕ್ಕಿಯಾಗಿ

ಭುವಿಯಲ್ಲೇ ದುಮ್ಮುಕ್ಕಿದವು

Saturday, 24 April, 2010

ಗುಡಿಯೊಳಗಿನ ಗುಡಿಸಲುಬಡತನವೆಂಬುದು ಬಡತನವಲ್ಲ


ಶ್ರೀಮಂತಿಕೆ ಎಂಬುದು


ದೇವರ ಗುಡಿಯ ಹುಂಡಿಯಲ್ಲ


ನಾವ೦ಟಿಸಿಕೊಂಡ


ವಾಸಿಯಾಗದ ರೋಗ

ಜಾಣ ಮರೆವು

ಕಗ್ಗತ್ತಲಲ್ಲಿ


ಮಿಣುಕು ಹುಳುವು ಪಳಿಸಿ


ಪ್ರಜ್ವಲಿಸಿದ ಬೆಳಕು


ನನ್ನವಳ ಮುಖಚರ್ಯೆಗೆ ನೆಸೆದಾಗ


ಮೂಡಿದ ಹೊಳಪಿಗೆ


ನಾಚಿ ತನ್ನ ಬೆಳಕನ್ನು ಮರೆಯಿತು

Thursday, 22 April, 2010

ಜೋಳಿಗೆ ತುಂಬಾ ಜೀವ ಜಲ

ಹೊಸದರಲಿ ಹೊಸತನವಿರಬೇಕು

ಹಳೆಯದು ಕನಸಾಗಿ ಉಳಿಯುವಂತೆ

ಗಾಡಿ ಕಟ್ಟಿ ಊರ ಸುತ್ತಲೊರಡಬೇಕು

ಕವಲುದಾರಿ ಕೂಡುವಂತೆ

ಸೆಳತದಲಿ ಇರಬೇಕು 

ನೀರ ಗುಳ್ಳೆ ಮರುಗದಂತೆ

ಜೊತೆಯಾಗಿರಬೇಕು

ಮನಸ್ಸು ಮಾಸದಂತೆ

ಅಸೆ ಆಕಾಂಕ್ಷೆಗಳನ್ನು  ಬಿಟ್ಟು ನಡೆಯಬೇಕು

ಹಾಲಕ್ಕಿಯವನ ಜೋಳಿಗೆಯಂತೆ

Tuesday, 20 April, 2010

ತಿಳಿ ಬಣ್ಣದ ಹಕ್ಕಿಬೆವರಿಗೊಗ್ಗದ ಹನಿಗಳು

ಬುವಿಯ ಸುತ್ತ ಗೆರೆ ಎಳೆದು

ಭೂತಾಕಾರವಾದಾಗ

ವರ್ತಮಾನದ ಹಕ್ಕಿಯು

ಭವಿಷ್ಯದ ಮರಿಗೆ

ಹಾಲುಣಿಸುವ ಪರಿಗೆ

ಹನಿಗಳೆಲ್ಲವೂ ತಿಳಿಗೊಂಡವು

Monday, 19 April, 2010

ಪ್ರೀತಿ ಮೀಂಟುವ ಸೆಳೆತ

ಪ್ರೀತಿಯ ಹುಟ್ಟು

ಅವಳೊಲಿದ ಕ್ಷಣ

ಮುಗಿಲ ಮನವ ಗೆದ್ದಂತೆ

ನನ್ನೊಳಗೆ ಪರಿಮಳ

ಕಿರುನಗೆಯ ಕುಡಿನೋಟ

ಕಡು ಕತ್ತಲೆಯನು ಮೀಟಿ

ಒಡಲ ಕಣ್ಗಳ ಹೊಳಪಲಿ

ಮೂಡುತಿರುವ ಬೆಳದಿಂಗಳು
ಮುಂಜಾನೆಯ ಚುಮು ಚುಮು ಚಳಿ

ಚೆಲ್ಲಿದ ಎಳೆ ಬಿಸಿಲು

ಅರಳುತಿರುವ ಹೂವಿನ ಮುಗುಳ್ನಗೆಯು

ಸನಿಹಕೆ ಸೆಳೆದಂತಾಗುತಿದೆ

Thursday, 15 April, 2010

ನನ್ನ ಬಣ್ಣಗಳಿಗೆ ಲೆಕ್ಕವಿಲ್ಲ
ಕಣ್ಣರಳಿಸಿದಷ್ಟು ಮೈಮನ
ಸೆಳೆಯುವುದು
ಮುಟ್ಟಿದರು ಮಾಸುತಿದ್ದೆ.
ಮಾರೆತ್ತರಕೆ ಹಾರುತ್ತಿದ್ದೆ
ದೂರ ಸರಿದರು
ನನ್ನವನ ಸ್ಪರ್ಶಕೆ ಮನಸೋತೆ
ತೇಲಿ ಹಾರುವಾಗ
ಕಣ್ಮರೆಯಾಗಿ ಕಾಡಿದ
ಹಿಂತಿರುಗಿಲ್ಲ.
ಹುಡುಕಲೋರಟಾಗ ವಸಂತ ಕಾಲದ ಸನಿಹ
ಬುವಿಯೆಲ್ಲ ಹಸಿರ ಔತಣ
ಚಿಗುರನು ಸವಿದ ಕೋಗಿಲೆಯು ಇಂಪಾಗಿ ಹಾಡಿದಾಗ
ಮನಸ್ಸು ಬಿಗಿ-ಸಡಿಲದಲಿ ಕಂಪಿಸಿ
ಋತುಮತಿಯಾದ ಹೆಣ್ಣಾಗಿರುವೆ.
ನನ್ನವನೆಲ್ಲಿ..... ನನ್ನವನೆಲ್ಲಿ........
ಒಡಲಾಳದ ಬೆಳಕು

ಗಾಡ ಕತ್ತಲೆಯಾದಾಗ

ಕಣ್ಣಲ್ಲೇ ಜೀವ ತುಂಬಿಕೊಂಡು

ಬದುಕ ಯಾತ್ರೆಯನು

ಮುನ್ನೆಡೆಸಲೊರಟು

ದಾರಿ ತಪ್ಪಿದ

ಹರೆಯದ ಹೆಣ್ಣು

ಹಾಲುಣಿಸಿದಾಗ

ಅವ್ವನ ಎದೆಯು ಬರಡಾಗಿತ್ತು

Friday, 9 April, 2010

ಕಮ್ಮಾರನ ಕುಲುಮೆಯಲ್ಲಿ

ಕರಗಿದ ಖಡ್ಗವ

ಎಡೆಬಿಡದೆ

ಬಡಿದ ಏಟಿಗೆ

ಸುರಿದ ಬೆವರು

ಜೋಪಡಿಗೆ ಹರಿದಾಗ

ಸೂರಿನ ತೀರು ಚಿಗುರಿ

ಕುಲುಮೆಯ ಕಾವನು ತನ್ನದಾಗಿಸಿಕೊಂಡು

ತಂಪನೆರೆಯಿತು

Tuesday, 6 April, 2010


ನನ್ನ ಯವ್ವನದ

ಪ್ರೇಮ ಪ್ರಸಂಗಗಳನ್ನು ಕವಿತೆಯಾಗಿ

ಬಣ್ಣಿಸಲು ಲೇಖನಿ ಹಿಡಿದಾಗ

ಎರಡನೆ ಸಾಲು ಮುಗಿಯುವ

ಮುನ್ನ

                                             ಲೇಖನಿಯ ಶಾಯಿ

                                             ತನ್ನ ಯವ್ವನವ ನೆನೆದು

                                             ಬರೆಯುವುದನ್ನೆ ಮರೆಯಿತು


ನೇಗಿಲ ಯೋಗಿಯು

ಇಡೀ ಸಮಾಜದ

ಹೊಲವ ಉತ್ತಾಗ

ಹಸಿರು ಬನದ ಚಿಗುರು

ಅಸ್ಪ್ರುಶ್ಯತೆ ಹೋಗಲಾಡಿಸಲು

ಪಣ ತೊಟ್ಟವು

ಚೀಕಳ್ಳಿಯ ಚೆಲುವೆ

ಬೇಲೂರ ಬೀದಿಯಲಿ

ಬಳುಕಿ, ಬಿಂಕದ ನಡಿಗೆಯಿಟ್ಟಾಗ

ಹಲ್ಕಿರಿದು ನಡೆದ 

ನಮ್ಮೂರ ಹೈದರ ಕಥೆ ಕೆತ್ತಲು 

ಬೆಟ್ಟ ಬೆಟ್ಟಗಳೇ ಕರಗಿ ಹೋದವು 

Monday, 8 March, 2010

ಒಡೆದ ಮುತ್ತನು ಸುರಿದು

ಮಾತು ಮಾತಿಗೆ ಪೋಣಿಸಲು

ಹುರಿದುಂಬಿದ ಮನೆಯಲಿ

ಹನಿ ನೀರಿಗೂ ಬರಗಾಲ

ಕರಿಮಣಿಯ ಕಿತ್ತೊಗೆದ ಮಧುಮಗಳ ಬಾಳು

ಎಣ್ಣೆ ಇಲ್ಲದ ದೀಪವು ಬರ ಬರನೆ ಉರಿದು

ಮನಸ್ಸಿಲ್ಲ ಮಂಚದಲಿ ಮಲ್ಲಿಗೆಯ ಹಾಸಿ

ಕರಗುವ ಮುತ್ತು ಒಂದೆಡೆ ಸೇರಿ

ಕಣ್ಣಂಚಿನ ಕಾಡಿಗೆಗೆ ಧಗಧಗಿಸಿ

ತನ್ನಾವರಿಸಿದ ಸೆಳೆಯು ಮೊನಚುಗೊಂಡು

ಊರ ಸುತ್ತಲೊರಟ ಮನವು ಹಿಂತಿರುಗಿ ಬರುವುದೆಂದು

ಸೂರಿನಡಿ ನುಡಿಯುತಿದೆ ಶಕುನದ ಹಕ್ಕಿ

Monday, 1 March, 2010

ಮಿಣಕು ಬಳ್ಳಿಯ ಸುಳಿಯಲ್ಲಿ


ಕವಿದ ಕಾರ್ಮೂಡಗಳು
ಪ್ರತಿದ್ವನಿಸಿದ  ಗುಡುಗು ಮಿಂಚು
ತಳಮಳಗೊಂಡ ತಪ್ಪಿಗೆ
ಬಂಧಿಯಾದೆ

ಸೊಬಗಿನ  ಕಡಲ ಕಿನಾರೆಯು
ಆರ್ಭಟಿಸಿ ಬಂದಪ್ಪಳಿಸಿದ
ರಭಸಕೆ ಎಣಿಕೆಗೆಸಿಗದಷ್ಟು
ವಸಂತ ಕಳೆದಿವೆ

ಒಡದಾಳದಲಿ ಮೂಡಿದ  ಬೆಳಕು
ಬಾಹ್ಯದಲಿ ಬೀಸುತಿರುವ ತಂಗಾಳಿ
ಬಳ್ಳಿಯಂತೆ ಚಿಗುರಿದ ಕನಸು
ಆಸರೆಯ ಬೇಡುತಿದೆ

Friday, 29 January, 2010

ಚಿಗುರಿತು ಬೆಳಕು

ನೀರ ಕೊಯ್ದರು ಗಾಳಿಯ ಸೀಳಿದರು

ತೊಗಟೆಯ ಬಿರುಕುಗಳ

ಮಯ್ಯ ಮೇಲೆ ಎಳೆದುಕೊಂಡರು
ಭುವಿಯೆಲ್ಲ ಗೆರೆಗಳು

ತಿರುಗುತ್ತಿಲ್ಲ ಹುಟ್ಟು ಸಾವುಗಳನು ಹೊತ್ತು

ಭಾರವಾದ ಉಸಿರು

ಇನ್ನೇನು ಮುಗಿದೇ ಹೋಯಿತೆನ್ನುವಷ್ಟರಲ್ಲಿ

ಕಣ್ಣುಗಳಲ್ಲೇ ಇಡೀ ಬೆಳಕನ್ನು ತುಂಬಿಕೊಂಡು

ನನ್ನೆಡೆಗೆ ನೋಡಿದ ಹೊಳಪು

ಹೇಗೋ ನೆರಳುಗಳ ಸೀಳಿಕೊಂಡು

ನನ್ನಲ್ಲೆಲ್ಲ ಪ್ರವಹಿಸಿ

ಪುಳಕ, ತೆನೆ ತೂಗಿದಂತೆ ಹಗುರ

ಚಲನೆ ಶುರುವಾಯಿತು

ನೆಲಬೇರುಗಳಿಗೆ ಮತ್ತೆ ಚಿಗುರು.

                                       (ಮಂಜುನಾಥ.ಎಸ್)

Thursday, 21 January, 2010

ಮನಸ್ಸೆಂಬ ಸಂಗಾತಿ
ಪ್ರೀತಿಯ ನಿವೇದಿಸಿಕೊಂಡಾಗ
ತೇವಗೊಂಡ ಕಣ್ಗಳಿಂದ
ಜಾರುತಿರುವ ಹನಿಗಳ ರಭಸಕೆ
ಕೊಚ್ಚಿಹೋದ ನೂರೆಂಟು ಭಾವನೆಗಳು

ನಿವೇದಿಸಿಕೊಂಡ ಪ್ರೀತಿಯನು
ಹೃದಯದಲ್ಲಿಟ್ಟು ಕೊಳ್ಳಲೆತ್ನಿಸಿದರು
ಎದುಸಿರು ಬಂದು ಹೊರದಬ್ಬಿಹೇಳುತಿದೆ
ಇಲ್ಲಿ ಗಾಳಿಗೂ ಜಾಗವಿಲ್ಲವೆಂದು


ಹೊರದಬ್ಬಿದ ರಭಸಕೆ
ಘಾಸಿಗೊಂಡ ಮನಸ್ಸು
ಹುಚ್ಚೆದ್ದು ಓಡುವಂತೆ ಹೃದಯದ ಬಡಿತ ಹೆಚ್ಚಾಗಿ
ಮುಚ್ಚಲೆತ್ನಿಸುತಿರುವ ಕಣ್ ರಪ್ಪೆಗಳು


ಏನೂ ಹೇಳಲು ಹೊರಟ
ತುಟಿಗಳು ಅದುರಿ ಜಡಗೊಂಡಿದೆ
ನನ್ನ ಸನಿಹದಲೇ ಸುಳಿಯುತ್ತಿರುವ
ನಿನ್ನ ಕೊನೆಯುಸಿರು ಸೇರಿ 
ತಲ್ಲಣಿಸುತಿದೆ


ನಿನ್ನನರಸುತ ಹೊರಟ

ಎಷ್ಟೋ ದಿನಗಳ ಕನಸು

ನನಸಾದ ದಿನವೆಂದು

ಕಲ್ಪನೆಗೂ ಮೀರಿ ಕುಣಿದೆಕವಿದ ಮಂಜಿನ ಹನಿಯಲಿ

ಮುಳುಗೇಳುತಿರುವ ನಗುವಿನ ಒಳಗೆ

ಸಣ್ಣ ದನಿಯ ಮಾತೊಂದು

ಹೊರಹೊಮ್ಮುತಿದೆ


ಮುಸುಕಿದ ಮಂಜಿನ ಒಳಗೆ

ಬಿರುಸುಗೊಂಡ ನೋಟ

ಕಣ್ಣಾಯಿಸಿದೆಲ್ಲಲ್ಲ ಹೂರಾಶಿ

ಸುವಾಸನೆಯ ತಂಪು


ಉಕ್ಕುವ ಕಡಲ ಕಿನಾರೆ

ಅಳಿವಿಲ್ಲದ ಒಲವಿನ ಪಾದಕೆ

ಮೃದುವೆನ್ನುವ ಸ್ಪರ್ಶ

Wednesday, 13 January, 2010

ನೀರೆ .....

ಮಾತಿನ ಮಂಟಪಕೆ ಕರೆದು

ಮೌನಕೆ ಶರಣಾಗಿ

ಪ್ರೀತಿಯನ್ನು ಹುದಿಗಿಸಬೇಡನಿನ್ನೆಯ ಬಡತನ ಶೂಲೆಯ

ನೀಗಿಸಲು ಹೊರಟು

ಸಿರಿವಂತರ ಸುಂಟರಗಾಳಿಗೆ ಸಿಕ್ಕು

ಬಾಡಿಹೋದ ಬದುಕಲಿ

ಚಿಗುರೊಡೆದ ಪ್ರೀತಿಯನು

ಚಿವುಟ ಬೇಡ
ಕ್ಷೀಣಿಸಿದ ದೇಹವನು

ಚಲ್ಲಾಪಿಲ್ಲಿಯಾದ ಬದುಕನು

ಕಟ್ಟುವ ಚಿತ್ತದ ಮುಂದೆ

ನನ್ನ ಕಣ್ಣ ಹನಿಯು ಬೇಡುತಿದೆ


ನಿನ್ನ ದೇಹವನು ಅಪರಿಚಿತರೊಡನೆ

ಹಂಚಿಕೊಂಡಿದ್ದರೇನು

ಮನಸ್ಸು ಪವಿತ್ರವಾಗಿದೆ