Friday, 29 January 2010

ಚಿಗುರಿತು ಬೆಳಕು

ನೀರ ಕೊಯ್ದರು ಗಾಳಿಯ ಸೀಳಿದರು

ತೊಗಟೆಯ ಬಿರುಕುಗಳ

ಮಯ್ಯ ಮೇಲೆ ಎಳೆದುಕೊಂಡರು
ಭುವಿಯೆಲ್ಲ ಗೆರೆಗಳು

ತಿರುಗುತ್ತಿಲ್ಲ ಹುಟ್ಟು ಸಾವುಗಳನು ಹೊತ್ತು

ಭಾರವಾದ ಉಸಿರು

ಇನ್ನೇನು ಮುಗಿದೇ ಹೋಯಿತೆನ್ನುವಷ್ಟರಲ್ಲಿ

ಕಣ್ಣುಗಳಲ್ಲೇ ಇಡೀ ಬೆಳಕನ್ನು ತುಂಬಿಕೊಂಡು

ನನ್ನೆಡೆಗೆ ನೋಡಿದ ಹೊಳಪು

ಹೇಗೋ ನೆರಳುಗಳ ಸೀಳಿಕೊಂಡು

ನನ್ನಲ್ಲೆಲ್ಲ ಪ್ರವಹಿಸಿ

ಪುಳಕ, ತೆನೆ ತೂಗಿದಂತೆ ಹಗುರ

ಚಲನೆ ಶುರುವಾಯಿತು

ನೆಲಬೇರುಗಳಿಗೆ ಮತ್ತೆ ಚಿಗುರು.

                                       (ಮಂಜುನಾಥ.ಎಸ್)

Thursday, 21 January 2010

ಮನಸ್ಸೆಂಬ ಸಂಗಾತಿ
ಪ್ರೀತಿಯ ನಿವೇದಿಸಿಕೊಂಡಾಗ
ತೇವಗೊಂಡ ಕಣ್ಗಳಿಂದ
ಜಾರುತಿರುವ ಹನಿಗಳ ರಭಸಕೆ
ಕೊಚ್ಚಿಹೋದ ನೂರೆಂಟು ಭಾವನೆಗಳು

ನಿವೇದಿಸಿಕೊಂಡ ಪ್ರೀತಿಯನು
ಹೃದಯದಲ್ಲಿಟ್ಟು ಕೊಳ್ಳಲೆತ್ನಿಸಿದರು
ಎದುಸಿರು ಬಂದು ಹೊರದಬ್ಬಿಹೇಳುತಿದೆ
ಇಲ್ಲಿ ಗಾಳಿಗೂ ಜಾಗವಿಲ್ಲವೆಂದು


ಹೊರದಬ್ಬಿದ ರಭಸಕೆ
ಘಾಸಿಗೊಂಡ ಮನಸ್ಸು
ಹುಚ್ಚೆದ್ದು ಓಡುವಂತೆ ಹೃದಯದ ಬಡಿತ ಹೆಚ್ಚಾಗಿ
ಮುಚ್ಚಲೆತ್ನಿಸುತಿರುವ ಕಣ್ ರಪ್ಪೆಗಳು


ಏನೂ ಹೇಳಲು ಹೊರಟ
ತುಟಿಗಳು ಅದುರಿ ಜಡಗೊಂಡಿದೆ
ನನ್ನ ಸನಿಹದಲೇ ಸುಳಿಯುತ್ತಿರುವ
ನಿನ್ನ ಕೊನೆಯುಸಿರು ಸೇರಿ 
ತಲ್ಲಣಿಸುತಿದೆ


ನಿನ್ನನರಸುತ ಹೊರಟ

ಎಷ್ಟೋ ದಿನಗಳ ಕನಸು

ನನಸಾದ ದಿನವೆಂದು

ಕಲ್ಪನೆಗೂ ಮೀರಿ ಕುಣಿದೆ







ಕವಿದ ಮಂಜಿನ ಹನಿಯಲಿ

ಮುಳುಗೇಳುತಿರುವ ನಗುವಿನ ಒಳಗೆ

ಸಣ್ಣ ದನಿಯ ಮಾತೊಂದು

ಹೊರಹೊಮ್ಮುತಿದೆ


ಮುಸುಕಿದ ಮಂಜಿನ ಒಳಗೆ

ಬಿರುಸುಗೊಂಡ ನೋಟ

ಕಣ್ಣಾಯಿಸಿದೆಲ್ಲಲ್ಲ ಹೂರಾಶಿ

ಸುವಾಸನೆಯ ತಂಪು


ಉಕ್ಕುವ ಕಡಲ ಕಿನಾರೆ

ಅಳಿವಿಲ್ಲದ ಒಲವಿನ ಪಾದಕೆ

ಮೃದುವೆನ್ನುವ ಸ್ಪರ್ಶ

Wednesday, 13 January 2010

ನೀರೆ .....

ಮಾತಿನ ಮಂಟಪಕೆ ಕರೆದು

ಮೌನಕೆ ಶರಣಾಗಿ

ಪ್ರೀತಿಯನ್ನು ಹುದಿಗಿಸಬೇಡ



ನಿನ್ನೆಯ ಬಡತನ ಶೂಲೆಯ

ನೀಗಿಸಲು ಹೊರಟು

ಸಿರಿವಂತರ ಸುಂಟರಗಾಳಿಗೆ ಸಿಕ್ಕು

ಬಾಡಿಹೋದ ಬದುಕಲಿ

ಚಿಗುರೊಡೆದ ಪ್ರೀತಿಯನು

ಚಿವುಟ ಬೇಡ




ಕ್ಷೀಣಿಸಿದ ದೇಹವನು

ಚಲ್ಲಾಪಿಲ್ಲಿಯಾದ ಬದುಕನು

ಕಟ್ಟುವ ಚಿತ್ತದ ಮುಂದೆ

ನನ್ನ ಕಣ್ಣ ಹನಿಯು ಬೇಡುತಿದೆ


ನಿನ್ನ ದೇಹವನು ಅಪರಿಚಿತರೊಡನೆ

ಹಂಚಿಕೊಂಡಿದ್ದರೇನು

ಮನಸ್ಸು ಪವಿತ್ರವಾಗಿದೆ