Saturday, 26 June 2010

ಬಿಚ್ಚೋಲೆ

ಗಂಜಲದಲಿ ಮನೆಯ 

ತೊಳೆದು  

ಬಾಗಿಲಂಗಳದಲಿ  

ಸಗಣಿ ಎರಚಿ  

ದೇವರ ಕೋಣೆಯಲಿ 

ಬೆಣವಣ್ಣನಿಟ್ಟು  

ಪೂಜಿಸಿದವಳು, 

ಕೊಟ್ಟಿಗೆಯ ಸ್ವಚ್ಚಗೊಳಿಸಿ  

ಬೆರಣಿಗೆ ಬೆಂಕಿಯಿಟ್ಟು ಬೆಚ್ಚಗಾದಳು

Saturday, 19 June 2010

ಮಣ್ಣೆಂಟೆಯೊಳು ತೆನೆ ಪೈರು

ಬಡತನದ ದೀವಿಗೆಯ ಹೊತ್ತು

ಕಾಮ ಕ್ರೋಧವನು ಕತ್ತಲೆಗೆ ದೂಡಿ

ಪೂಜೆ ಪುನಸ್ಕಾರವನು ಬದಿಗೊತ್ತಿ

ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು

ಕುರಿಕೆಯ ಹಿಡಿದು ಹೊರಟ ಹಸಿ ಮೈ

ಜಡಿ ಮಳೆಗೆ ಬೆವರು ಸುರಿಸಿ,

ಮಣ್ಣೆಂಟೆ ಕಳೆಗಳನು ಬಡಿದು

ಬಡ ಬಗ್ಗರ ಬದುಕ ಕಟ್ಟಿ

ಮೊಳಕೆಯೊಡೆವ ಮೊದಲೆ

ತನ್ನಾಳುವ ಅರಸನ ಕೈಗೆ ಸಿಕ್ಕು

ಮೇಣಿಯ ಹಾಲನು ಕುಡಿದು

ನೇಗಿಲ ಯೋಗಿಯಾಗಿರುವೆ.

Friday, 11 June 2010

ಕಾಲವನ್ನು ಸರಿಸಿ

ಸುರುಟಿಕೊಂಡ ಪ್ರೀತಿ

ಕರಗಿದ ಮುತ್ತು

ಒಗ್ಗೂಡಿ

ಮರು ಹುಟ್ಟು.

ನೋವು ಹುದುಗಿಸಿಟ್ಟು

ಅವಳಿಗಾಗಿ ಕಾಯುವ ಕಾಲ

ನನ್ನ ಮುಂದೆ ನಶ್ವರ

Saturday, 5 June 2010

ಕೃತಿಗೆ ಸಿಗದ ಪ್ರಕೃತಿ

ಅರಕಲು ಭೂಮಿಯ ಕೊರೆದು

ಅರೆ ಬರೆ ಅಕ್ಷರವ ಗೀಚುತ

ಮಾರುದ್ದ ಮಾಲೆಯ ತೂಗಿಕೊಂಡು

ಮಿರ ಮಿರ ಮಿಂಚುವ ಬಟ್ಟೆಯ ಧರಿಸಿ

ಸಾಧನೆಗಳೆಲ್ಲವು, ನಾನು ನನ್ನಿನ್ನೆಂದು,

ಪ್ರಶಸ್ತಿಯೆಂಬ ಹೊಲಸನು ಮುಡಿಗೇರಿಸಿ

ಓರೆ-ಕೋರೆಗಳನು ತಿದ್ದಲೊರಟು

ಪಾಪ ಪರಿವರ್ತನೆಯೆಂಬ

ಮೂಡನಂಬಿಕೆಗೆ  ಸೆಣೆದು

ಪರಲೋಕ ಕಲ್ಯಾಣಕ್ಕಾಗಿ  ಗದ್ದುಗೆಯೊಳಗಿಳಿದು

ಅಸ್ಪ್ರುಶ್ಯತೆಗೆ  ಜನ್ಮ ನೀಡಿ 

ಜಗವೆಲ್ಲ ನನ್ನದೆನ್ನುವವನ 

ಬುದ್ದಿಯೊಳ ಬುದ್ದಿಯನು 

ತಿದ್ದಿ ಬುದ್ದಿಯೇಳಲೋರಟವರು ಮೂರ್ಖರಲ್ಲ